ಕಾಜಪುಟೆ ಎಣ್ಣೆಮರ

ಮಿರ್ಟೇಸೀ ಕುಟುಂಬಕ್ಕೆ ಸೇರಿದ ಮೆಲಲ್ಯೂಕ ಲ್ಯೂಕೊಡೆಂಡ್ರಾನ್ ಎಂಬ ವೈಜ್ಞಾನಿಕ ಹೆಸರಿನ ಒಂದು ನಿತ್ಯಹರಿದ್ವರ್ಣದ ಸಸ್ಯ. ಮರಗಳ ಮತ್ತು ಪೊದೆಗಳ ರೂಪದಲ್ಲಿ ಬೆಳೆಯುತ್ತದೆ. ಈ ಮರದ ತೊಗಟೆ ಬೆಳ್ಳಗೆ ಮೃದುವಾಗಿದ್ದು ಕಾಗದದ ರೂಪದಲ್ಲಿ ಸುಲಿದು ಬರುತ್ತದೆ. ಎಲೆಗಳಲ್ಲಿ ಎಣ್ಣೆಗ್ರಂಥಿಗಳಿವೆ. ಹೂಗಳು ಮಾಸಲು ಬಿಳಿಯ ಬಣ್ಣದವು; ಇವಕ್ಕೆ ತೊಟ್ಟಿಲ್ಲ, ಬೀಜಗಳು ಗಟ್ಟಿ ಹಾಗೂ ಬಲು ಚಿಕ್ಕವು.

 ಇದು ಮಲಯ ಥೈಲ್ಯಾಂಡ್, ಬರ್ಮ, ಕಾಂಬೋಡಿಯ, ಆಸ್ಟ್ರೇಲಿಯ ದೇಶಗಳಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ತಗ್ಗಾದ ಜೌಗುಪ್ರದೇಶಗಳಲ್ಲಿ ಸೊಂಪಾಗಿ ಬೆಳೆಯುತ್ತದೆ. ಭಾರತದಲ್ಲಿ ಉದ್ಯಾನವನಗಳಲ್ಲಿ ಬೆಳೆಸುವುದುಂಟು. ಮರದ ತೊಗಟೆಯಿಂದ ದಿಂಬುಗಳು, ಮೆತ್ತೆ, ಚಾಪೆಗಳು ಮತ್ತು ಮೀನಿನ ಬಲೆಗಳನ್ನು ಮಾಡುತ್ತಾರೆ. ಪೂರ್ವಕಾಲದಲ್ಲಿ ಈ ತೊಗಟೆಯನ್ನು ಕಾಗದದ ರೂಪದಲ್ಲಿ ಬಳಸುತ್ತಿದ್ದರು. ಮರ ಬಹಳ ದೃಢವಾಗಿರುವುದರಿಂದ ಇದನ್ನು ಸಮುದ್ರನೌಕೆಗಳನ್ನು ಕಟ್ಟಲು ಉಪಯೋಗಿಸುತ್ತಾರೆ. ರೈಲ್ವೆ ಸ್ಲೀಪರುಗಳಾಗಿಯೂ ಇದರ ಉಪಯೋಗ ಉಂಟು.

 ಕಾಜಪುಟೆ ಎಣ್ಣೆ ಮರದ ಎಲೆಗಳನ್ನು ನೀರಿನಲ್ಲಿ ಅರೆದು ಬಟ್ಟೆ ಇಳಿಸಿ ಎಣ್ಣೆಯನ್ನು ಪಡೆಯಲಾಗುವುದು. ಹೊಸತಾಗಿ ತೆಗೆದ ಎಣ್ಣೆ ಬಣ್ಣರಹಿತ ಅಥವಾ ತೆಳು ಹಳದಿ ಬಣ್ಣದ್ದು. ಶೇಖರಿಸಿಟ್ಟ ಎಣ್ಣೆ ಕಾಲಕ್ರಮೇಣ ತನ್ನಲ್ಲಿಯ ತಾಮ್ರದ ಅಂಶದಿಂದಾಗಿ ಹಸಿರು ಬಣ್ಣಕ್ಕೆ ತಿರುಗುತ್ತದೆ. ಈ ಎಣ್ಣೆ ಸುಲಭವಾಗಿ ಆವಿಯಾಗುತ್ತದೆ. ವಾಸನೆಯಲ್ಲಿ ಕರ್ಪೂರ ಮತ್ತು ಕರ್ಪೂರ ತೈಲವನ್ನು ಹೋಲುತ್ತದೆ. ಇದಕ್ಕೆ ಅತೀವಕಾರದ ರುಚಿಯಿದೆ. ಇದನ್ನು ತಂಪಾದ ಮತ್ತು ಬೆಳಕು ಇರದ ಪ್ರದೇಶಗಳಲ್ಲಿ ಶೇಖರಿಸಿ ಇಡಬೇಕು. ಈ ಎಣ್ಣೆಗೆ ಅನೇಕ ಉಪಯೋಗಗಳುಂಟು. ಮುಖ್ಯವಾಗಿ ಇದು ಚರ್ಮವ್ಯಾಧಿಗಳಲ್ಲಿ ಲೇಪನವಾಗಿ ನೋವು ನಿವಾರಕವಾಗಿ ಮತ್ತು ಚಿಕ್ಕ ಪ್ರಮಾಣದಲ್ಲಿ ಉದ್ದೀಪನಕಾರಿಯಾಗಿ ಮತ್ತು ವಾತಹರವಾಗಿ ಉಪಯೋಗವಾಗುವುದು. ಶ್ವಾಸಕೋಶ ಸಂಬಂಧಿ ವ್ಯಾಧಿಗಳಲ್ಲೂ ಇದರ ಬಳಕೆ ಉಂಟು.

(ಬಿ.ಪಿ.; ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ